ಮಂಗೇಶರಾವ್, ಉಗ್ರಾಣ
	1893. ಕವಿ, ಸಾಹಿತಿ, ಉತ್ತಮ ಶಿಕ್ಷಕ ಹಾಗು ಕಲಾಭಿಮಾನಿ. 16-9-1893ರಲ್ಲಿ ಕುಂದಾಪುರದಲ್ಲಿ ಸಾರಸ್ವತ ಕುಟುಂಬವೂಂದರಲ್ಲಿ ಹುಟ್ಟಿದರು. ತಂದೆ ಉಗ್ರಾಣ ಶಿವರಾಯರು. ಮೆಟ್ರಿಕ್‍ವರೆಗೂ ಓದಿದ ಇವರು ಮುಂದೆ ಓದಲಾರದೆ ಕನ್ನಡ ಅಧ್ಯಾಪಕರಾದರು. ಅನಂತರ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಕೆಲಕಾಲ ದುಡಿದು 1916ರಲ್ಲಿ ಪುತ್ತೂರು ಸೆಕೆಂಡರಿಶಾಲೆಯಲ್ಲಿ ಅಧ್ಯಾಪಕರಾಗಿ 1948ರಲ್ಲಿ ನಿವೃತ್ತರಾದರು. ಪ್ರೊ. ಎಂ. ಮರಿಯಪ್ಪ ಭಟ್ಟ ಮತ್ತು ಸೇಡಿಯಾಪು ಕೃಷ್ಣಭಟ್ಟರು ಇವರ ಶಿಷ್ಯ ವರ್ಗದಲ್ಲಿ ಪ್ರಮುಖರು. ಅಧ್ಯಯನ-ಅಧ್ಯಾಪನ ಎರಡೂ ಋಷಿ ಮಾನ್ಯ ಆಜ್ಞೆಗಳೆಂದು ತಿಳಿದು ತಮ್ಮ ಇಳಿವಯಸ್ಸಿನಲ್ಲೂ ಅವನ್ನು ತಪ್ಪದೆ ಪಾಲಿಸಿಕೊಂಡು ಬಂದವರು. ಹಳಗನ್ನಡ ಸಾಹಿತ್ಯ ಇವರಿಗೆ ಕರತಲಾಮಲಕ. ಈ ಸಾಹಿತ್ಯದ ಸೊಗಸಾದ ಭಾಗಗಳನ್ನು ರಾಗವಾಗಿ ಓದಿ ಅರಸಿಕರಲ್ಲೂ ರಸಾಸ್ವಾದನೆ ಮೂಡಿಸಿದವರು. ಇಂಗ್ಲೀಷ್ ಸಾಹಿತ್ಯದಲ್ಲೂ ಇವರದು ಪರಿಣತಿ. ಒಳ್ಳೆಯ ಸಾಹಿತ್ಯ ವಿಮರ್ಶೆ ಹಾಗು ವಿದ್ವತ್‍ಪೂರ್ಣ ಭಾಷಣಗಳಿಂದ ಜನಮನವನ್ನು ಸೂರೆಗೊಂಡವರು. ಇವರು ರತ್ನಾಕರವರ್ಣಿಯ ಭರತೇಶ ವೈಭವವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿ ವಿದ್ವತ್ಪೂರ್ಣವಾದ ಪ್ರಸ್ತಾವನೆ ಬರೆದಿದ್ದಾರೆ. ನಾರಾಯಣಕವಿಯ ಉತ್ತರರಾಮಚರಿತೆಯನ್ನು ಕುರಿತು ಸಂಶೋಧನೆ ಮಾಡಿದ್ದಾರೆ. ಕೌಶಿಕ ರಾಮಾಯಣವನ್ನು ಕಾರಂತರ ಜೊತೆಯಲ್ಲಿ ಸಂಪಾದಿಸಿದ್ದಾರೆ. ಇವರ ಕೃತಿಗಳಲ್ಲಿ 'ಡಾನ್‍ಕ್ವಿಕ್ಸೋಟ್ ತುಂಬಾ ಜನಪ್ರಿಯವಾಗಿತ್ತು. ಆಗಿನ ಪಠ್ಯಪುಸ್ತಕಗಳಲ್ಲಿ ಇವರ ಹತ್ತಾರು ಕವಿತೆಗಳು, ಗದ್ಯ ಬರಹಗಳು ಸಮಾವೇಶಗೊಂಡಿವೆ. ಭಾರತಾದ್ಯಂತ ಓಡಾಡಿದ ಇವರು ತಮ್ಮ ಪ್ರವಾಸದ ಅನುಭವಗಳನ್ನು 'ತಂದೆ ಮಗಳಿಗೆ ಬರೆದ ಪತ್ರಗಳು ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಯಕ್ಷಗಾನ ಇವರ ಆಸಕ್ತ ವಿಷಯಗಳಲ್ಲಿ ಒಂದು. ಗೋವಿಂದ ಪೈಗಳೊಂದಿಗೆ ನಿಕಟವಾದ ಸಾಹಿತ್ಯ ಸಂಪರ್ಕವಿದ್ದಿತು. 

	ಇವರು ಹಲವಾರು ಸಾಹಿತ್ಯ ವಿಮರ್ಶನಾತ್ಮಕ ಲೇಖನಗಳು, ಕವಿತೆಗಳನ್ನಲ್ಲದೆ ಸಾಹಿತ್ಯ ಮಣಿಮಾಲೆ, ಕಾವ್ಯರತ್ನಾಕರ, ಕಾಮರೂಪ ಇತ್ಯಾದಿ ಕತೆಗಳನ್ನೂ ಲೋಭಿ ಪ್ರಹಸನ, ನೂತನ ಕನ್ನಡ ಪಾಠಮಾಲೆ, ಪ್ರೌಢಪಾಠಮಾಲಿಕೆ, ಕನ್ನಡ ಬಾಲವ್ಯಾಕರಣ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಮಂಗಳೂರಿನ ಬಾಲಸಾಹಿತ್ಯ ಮಂಡಳಿ, ಬಾಸೆಲ್ ಮಿಷನ್, ಮೆಕ್‍ಮಿಲನ್ ಮತ್ತು ದಾಮೋದರ ಬಾಳಿಗ ಈ ಮುಂತಾದ ಸಂಸ್ಥೆಗಳಿಂದ ಪ್ರಕಟವಾಗಿರುವ ಕನ್ನಡ ಪುಸ್ತಕದಲ್ಲಿ ಮಂಗೇಶರಾಯರ ಅನೇಕ ಪದ್ಯ ಗದ್ಯ ಬರೆಹಗಳು ಸೇರಿವೆ. ಪುತ್ತೂರಿನ ಕರ್ನಾಟಕ ಸಂಘದ ವತಿಯಿಂದ ಶ್ರೀಮತಿ ಲೀಲಾ ಭಟ್ಟರು ಇವರ ಸಮಗ್ರ ಕೃತಿಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ (2000-2001). 								
 (ಎ.ಪಿ.ಇಸ್.ಯು.)

ಪರಿಷ್ಸರಣೆ:
ಡಾ|| ಶ್ರೀನಿವಾಸ ಹಾವನೂರ್
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ